ನೆರೂದ, ಪ್ಯಾಬ್ಲೊ
1904-1973. ಚಿಲಿ ದೇಶದ ಬಹು ದೊಡ್ಡ ಕವಿ. 20ನೆಯ ಶತಮಾನದ ಸ್ಪ್ಯಾನಿಷ್ ಅಮೆರಿಕನ್ ಕವಿಗಳಲ್ಲಿ ಅತ್ಯಂತ ಶ್ರೇಷ್ಠನಾದವ, ಸ್ವಂತಿಕೆ, ಸೃಜನ ಸಮೃದ್ಧಿಗಳುಳ್ಳ ಪ್ರತಿಭಾವಂತ. ಬರೆದುದು ಮಾತೃಭಾಷೆ ಸ್ಪ್ಯಾನಿಷ್‍ನಲ್ಲಿ. 1904ನೆಯ ಜುಲೈ 12ರಂದು ಮಧ್ಯ ಚಿಲಿಯ ಪರ್ರಲ್ ಎಂಬ ಒಂದು ಸಣ್ಣ ಊರಿನಲ್ಲಿ ಹುಟ್ಟಿದ. ತಂದೆ ಜೋಸ್ ಡೆಲ್ ಕಾರ್ಮೆನ್ ರೆಯಿಸ್ ರೈಲ್ವೆ ಕಾರ್ಮಿಕ. ತಾಯಿ ರೋಸಾ ಬಾಸೋಲ್ಟೊ. ಈತನ ಹುಟ್ಟು ಹೆಸರು ನೆಫ್ತಾಲಿ ರಿಕಾರ್ಡೊ ರೆಯಿಸ್ ಬೆಸುಯಾಲ್ಟೊ. ಹುಟ್ಟಿದ ಒಂದೇ ತಿಂಗಳೊಳಗೆ ತಾಯಿಯನ್ನು ಕಳೆದುಕೊಂಡ. ಎರಡು ವರ್ಷಗಳ ನಂತರ ರೆಯಿಸ್ ಕುಟುಂಬ ದಕ್ಷಿಣದ ಹೊಸನಾಡಿಗೆ ಹೋಗಿ ಟೆಮುಕೊ ಎಂಬ ಊರಿನಲ್ಲಿ ನೆಲೆಸಿತು. ತಂದೆ ಮರು ಮದುವೆಯಾದ.

1910ರಲ್ಲಿ ಟೆಮುಕೊದಲ್ಲೇ ಹತ್ತು ವರ್ಷಗಳ ಶಾಲಾವ್ಯಾಸಂಗವನ್ನು ಮುಗಿಸಿದ. ಹತ್ತು ವರ್ಷದವನಾಗಿದ್ದಾಗಲೇ ಕವಿತೆಗಳನ್ನು ರಚಿಸತೊಡಗಿದ. ಆದರೆ ತಂದೆಯ ಹೆದರಿಕೆಗೆ ಗುಟ್ಟಾಗಿ ಬರೆಯುತ್ತಿದ್ದ. ನೆರೂದನನ್ನು ಜೆಕ್ ಕವಿ ಮತ್ತು ನಾಟಕಕಾರ ಯಾನ್ ಬಹುವಾಗಿ ಮೆಚ್ಚಿಕೊಂಡಿದ್ದರ ಗುರುತಾಗಿ ತನ್ನ ಕಾವ್ಯನಾಮವನ್ನು ಪ್ಯಾಬ್ಲೊ ನೆರೂದ ಎಂದಿಟ್ಟುಕೊಂಡು ಮುಂದೆ 1946ರಲ್ಲಿ ಆ ಹೆಸರನ್ನೇ ಕಾನೂನುಬದ್ಧವಾಗಿ ತನ್ನ ಹೆಸರಾಗಿ ಸ್ಥಿರೀಕರಿಸಿಕೊಂಡ.

 	ಈತನ ಜೀವನದ ಪ್ರಥಮ ಮಹತ್ತರ ಘಟನೆಯೆಂದರೆ 12ನೆಯ ವಯಸ್ಸಿನಲ್ಲಿ ಚಿಲಿಯ ಸುಪ್ರಸಿದ್ಧ ಕವಿ ಗೇಬ್ರಿಯೆಲಾ ಮಿಸ್ಟ್ರಾಲ್‍ನ ಪರಿಚಯ ಪಡೆದದ್ದು. ಅದರಿಂದ ಪ್ರಾಚೀನ ಮಹಾಕವಿಗಳ ಕಾವ್ಯ ಪರಿಚಯವಾಯಿತು. ಈತನ ಕಾವ್ಯ ಮನೋಧರ್ಮದ ವಿಕಾಸಕ್ಕೆ ಈ ಪ್ರಭಾವ ತುಂಬ ಸಹಕಾರಿಯಾಯಿತು. ನೆರೂದನದು ಮೊದಲಿನಿಂದಲೂ ಕ್ರಾಂತಿಕಾರಕ ಪ್ರವೃತ್ತಿ. ಪೀಟರ್ ಕ್ರೊಪೊಟ್ಕಿನ್ನನ ಪ್ರಭುತ್ವರಹಿತ ಕಮ್ಯೂನಿಸಂ ಸಿದ್ಧಾಂತವನ್ನು ಬೆಂಬಲಿಸುತ್ತಿದ್ದ ಜೀನ್ ಗ್ರೇವನ ಗ್ರಂಥಗಳನ್ನೆಲ್ಲ ಭಾಷಾಂತರಿಸಿದ. ನಿರಂಕುಶ ಪ್ರಭುತ್ವ ಇಲ್ಲವೆ ಅಧಿಕಾರಶಾಹಿಗಳಿಂದ ಮುಕ್ತವಾದ ಸಮಾಜ ಸ್ಥಾಪನೆಗಾಗಿ ಉಗ್ರ ಹೋರಾಟಗಾರನಾದ.

 	1921ರಲ್ಲಿ ರಾಜಧಾನಿ ಸ್ಯಾಂಟೀಯಾಗೊ ನಗರಕ್ಕೆ ಬಂದು ಚಿಲಿ ವಿಶ್ವವಿದ್ಯಾನಿಯದ ಪೆಡಗಾಗಿಕಲ್ ಇನ್‍ಸ್ಟಿಟ್ಯೂಟಿನಲ್ಲಿ ಫ್ರೆಂಚನ್ನು ವಿಶೇಷ ಅಧ್ಯಯನಕ್ಕಾಗಿ ಆರಿಸಿಕೊಂಡು ಪದವಿ ತರಗತಿಗೆ ಸೇರಿದ. ಆದರೆ ಕಾವ್ಯದ ಸೆಳೆತದಲ್ಲಿ ವ್ಯಾಸಂಗ ಹಿಂದೆ ಬಿತ್ತು. ಕವನ ರಚನೆ, ಸಾಹಿತ್ಯಚರ್ಚೆಗಳಲ್ಲೇ ಮುಳುಗಿದ. 1923ರಲ್ಲಿ ಕ್ರೆಪುಸ್ಕುಲೇರಿಯಾ ಎಂಬ ತನ್ನ ಪ್ರಥಮ ಕವನ ಸಂಕಲನವನ್ನು ಸ್ವಂತ ವೆಚ್ಚದಲ್ಲಿ ಪ್ರಕಟಿಸಿದ. ಅದರ ಮರು ವರ್ಷ. ಅದೇ ಅಸಂಖ್ಯಾತ ವಾಚಕರನ್ನು ಆಕರ್ಷಿಸಿದ ಟ್ವೆಂಟಿ ಲವ್ ಪೊಯೆಮ್ಸ್ ಅಂಡ್ ಎ ಸಾಂಗ್ ಆಫ್ ಡಿಸ್ಪೇರ್- ಎಂಬ ಕವನ ಸಂಕಲನ; ಕವಿಗೆ ಪ್ರಚಂಡ ಜನಪ್ರಿಯತೆಯನ್ನು ತಂದ ಕೃತಿ. ಸ್ಪೇನ್ ಒಂದರಲ್ಲೇ ಇದರ ಎರಡೂವರೆ ಲಕ್ಷ ಪ್ರತಿಗಳು ಮಾರಾಟವಾದವು. ಈಗಲೂ ಇದು ಅತ್ಯಂತ ಜನಪ್ರಿಯವಾದ ಕೃತಿ ಎನಿಸಿದೆ. 1969ರಲ್ಲಿ ಇದರ ಇಂಗ್ಲಿಷ್ ಭಾಷಾಂತರ ಬಂತು. ಕವಿ ಪ್ರಖ್ಯಾತನಾದ. ಈತನ ಕವನಗಳು ಸಹಸ್ರಾರು ನೊಂದ ಜೀವಿಗಳಿಗೆ ಕಲ್ಯಾಣದ ಹೊಸ ಭರವಸೆಯನ್ನು ತಂದವು. ಕೇವಲ ಇಪ್ಪತ್ತು ವರ್ಷ ವಯಸ್ಸಿನಲ್ಲೇ ನೆರೂದ ಚಿಲಿಯ ಪ್ರಮುಖ ಕವಿಯೆನಿಸಿದ. ಫ್ರೆಂಚ್ ವ್ಯಾಸಂಗ ಕೈಬಿಟ್ಟಿತು. ಕಾವ್ಯ ಕೈಬಿಟ್ಟಿತು. ಅಟೆಂಪ್ಟ್ ಆಫ್ ದಿ ಇನ್‍ಫನಿಟ್ ಮ್ಯಾನ್; ರಿಂಗ್ಸ್; ದಿ ಎಂಥೂಸಿಯಾಸ್ಟಿಕ್ ಸ್ಲಿಂಗ್ ಷೂಟರ್ ಮುಂತಾದ ಕವನ ಸಂಕಲನಗಳು ಬಂದವು.

 	1927ರಲ್ಲಿ ರಂಗೂನಿಗೆ ಚಿಲಿಯ ಗೌರವ ಕಾನ್ಸಲ್ ಆಗಿ ನೇಮಕಗೊಂಡ. ಅಲ್ಲಿಂದ ರಾಯಭಾರಿ ಜೀವನ ಆರಂಭವಾಯಿತು. ಕೊಲಂಬೊ, ಜಕಾರ್ತ, ಜಾವಾಗಳಲ್ಲಿ ರಾಯಭಾರಿಯಾಗಿದ್ದಾಗ ಜಾವಾದಲ್ಲಿ ಮೇರಿಯಾ ಹಾಗೆನಾರ್ ಎಂಬ ಒಬ್ಬ ಡಚ್ ಹುಡುಗಿಯನ್ನು ಮದುವೆಯಾದ. ಅನಂತರ ಸಿಂಗಪುರದಲ್ಲಿದ್ದಾಗ ತನ್ನ ರಾಯಭಾರಿ ಜೀವನದ ಅನುಭವಗಳನ್ನೆಲ್ಲ ಸ್ವಾರಸ್ಯವಾಗಿ ಬರೆದಿಟ್ಟ. ನೆರೂದನ ದಾಂಪತ್ಯ ಜೀವನ ಸುಖಮಯವಾಗಲಿಲ್ಲ. ತೀವ್ರವಾದ ವ್ಯಾಕುಲ ಹಾಗೂ ಏಕಾಂಗಿತನಗಳಲ್ಲಿ ನರಳಿದ. ಜೋಸಿ ಬ್ಲಿಸ್ ಎಂಬ ಬರ್ಮೀ ಹುಡುಗಿಯೊಂದಿಗೆ ಬೆಳೆದ ಅನುರಾಗದಲ್ಲಿ ಈ ವ್ಯಥೆ ಮರೆಯಿತು. ದಕ್ಷಿಣ ಏಷ್ಯದಲ್ಲಿ ಕಳೆದ ದಿನಗಳಲ್ಲೇ ರೆಸಿಡೆನ್ಸ್ ಆನ್ ಅರ್ತ್ ಎಂಬ ಕಾವ್ಯವನ್ನು ರಚಿಸಿದ. 

 	1933ರಲ್ಲಿ ಬ್ವೇನಸ್ ಐರಿಸ್‍ನಲ್ಲಿ ಚಿಲಿಯ ಕಾನ್ಸಲ್ ಆದ. ಆಗಲೇ ಸ್ಪ್ಯಾನಿಷ್ ಕವಿ ಫ್ರೆಡ್ರಿಕೊ ಗಾರ್ಸಿಯಾ ಲೋರ್ಕಾನ ಪರಿಚಯವಾಯಿತು. ಮರುವರ್ಷ ಬಾರ್ಸಿಲೋನಾಕ್ಕೆ ಅನಂತರ ಮ್ಯಾಡ್ರಿಡ್‍ಗೆ ವರ್ಗವಾಯಿತು. ಅಲ್ಲಿ ಡೇಲಿಯಾ ಡೆಲ್ ಕ್ಯಾರಿಲ್ ಎಂಬಾಕೆಯನ್ನು ಮತ್ತೆ ಮದುವೆಯಾದ.

 	ಇದ್ದಕ್ಕಿದ್ದಂತೆ ಯೂರೋಪಿನ ಸಾಹಿತ್ಯಾಕಾಶದಲ್ಲಿ ನವೋಜ್ವಲ ತಾರೆಯಾಗಿ ಮೂಡಿದ ನೆರೂದನನ್ನು ಸ್ಪೇನಿನ ಬುದ್ದಿಜೀವಿಗಳೆಲ್ಲ ನಮನ, ಅಭಿನಂದನ ಗ್ರಂಥಗಳನ್ನರ್ಪಿಸಿ ಸ್ವಾಗತಿಸಿದರು.

 	1936ರಲ್ಲಿ ನಡೆದ ಸ್ಪೇನಿನ ಅಂತರ್ಯುದ್ಧ ನೆರೂದನ ಕಾವ್ಯಜೀವನಕ್ಕೆ ಭಂಗ ತಂತು. ಕವಿಯ ಪರಮ ಮಿತ್ರನಾದ ಗಾರ್ಸಿಯ ಲೋರ್ಕಾ ಮರಣದಂಡನೆಗೆ ಗುರಿಯಾದುದು, ಮಿಗ್ಯುವೆಲ್ ಹೆರ್ನಾಂಡೆಜ್ ಸೆರೆಯಾದುದು, ನೆರೂದನ ರಾಜಕೀಯ ಧೋರಣೆಯನ್ನು ನಿರ್ಣಯಿಸಿದವು.

     ಬದಲಾಯಿತು ಲೋಕ, ಅಂತೆಯೆ ನನ್ನೀ ಕಾವ್ಯ;
     ಈ ಸಾಲುಗಳ ಮೇಲೆ ಬಿದ್ದ ನೆತ್ತರ
     ಆಯಿತು ಚಿರಂತರ ಉತ್ತರೋತ್ತರ
	  ಅಳಿಸಲಾರದು ಇದು ಎಂದೆಂದೂ
     ಪ್ರೇಮದಂತೆ ಇದು ಸ್ಥಿರ

	ಎಂದು ಕವಿ ತನ್ನ ನಿರ್ಧಾರವನ್ನು ಕಾವ್ಯದಲ್ಲಿ ಬಿಂಬಿಸಿದ. ಈತನ ಜೀವನದಲ್ಲಿ ಇದೊಂದು ಮಹತ್ತರ ತಿರುವು. ಅಲ್ಲಿಂದ ಮುಂದೆ ಈತನ ಕಾವ್ಯ ಸಾಮಾಜಿಕ ಮತ್ತು ರಾಜಕೀಯ ನ್ಯಾಯಕ್ಕಾಗಿ ಹೋರಾಡಲು ಮೀಸಲಾಯಿತು. ಸ್ಪೇನ್ ಇನ್ ದಿ ಹಾರ್ಟ್ ಕವನ ಬಂದುದು ಆಗಲೇ.

 	1938ರಲ್ಲಿ ಈತ ಚಿಲಿಗೆ ಹಿಂತಿರುಗಿದ. ಮತ್ತೆ ಸರ್ಕಾರ ಈತನನ್ನು ಮೆಕ್ಸಿಕೊಗೆ ರಾಯಭಾರಿಯಾಗಿ ಕಳಿಸಿತು. ಅಲ್ಲಿ ಈತನ ಬಾಳಿನ ಇನ್ನೊಂದು ಉತ್ಕಟ ಕಾವ್ಯ ಸೃಷ್ಟಿಯ ಕಾಲ ಆರಂಭವಾಯಿತು. 2ನೆಯ ಮಹಾಯುದ್ಧ ಹಾಗೂ ಮೆಕ್ಸಿಕೋದ ಫ್ರೆಸ್ಕೊ ಚಿತ್ರಗಳ ಸ್ಫೂರ್ತಿಯಿಂದ ಕಾವ್ಯ ಬರತೊಡಗಿತು. 1945ರಲ್ಲಿ ಸೆನೆಟ್ಟಿಗೆ ಚುನಾಯಿತನಾದ. ಪ್ರೆಸಿಡೆಂಟ್ ವಿಡೇಲಾನೊಂದಿಗೆ ವಿರಸವಾಗಿ ಮೆಕ್ಸಿಕೋಗೆ ಹಿಂತಿರುಗಿದ. 1948ರಲ್ಲಿ ಪ್ಯಾರಿಸ್ ಶಾಂತಿ ಸಮ್ಮೇಳನಕ್ಕೆ ಹೋದ. 1949ರಲ್ಲಿ ಇಟಲಿ, ಫ್ರಾನ್ಸ್, ಸೋವಿಯೆತ್ ದೇಶ, ಚೀನದೇಶಗಳಲ್ಲಿ ಪ್ರವಾಸ ಮಾಡಿದ. 1953ರಲ್ಲಿ ಚಿಲಿಗೆ ಹಿಂದಿರುಗಿದ. 1959ರಲ್ಲಿ ಚಿಲಿ ಬರೆಹಗಾರರ ಒಕ್ಕೂಟದ ಅಧ್ಯಕ್ಷನಾದ. ಚಿಲಿಯಲ್ಲಿ ಬಲ ಪಕ್ಷದವರ ಸರ್ಕಾರ ಬಂದಾಗ ಕಮ್ಯೂನಿಸ್ಟನಾಗಿದ್ದ ಕವಿ ತಲೆ ಮರೆಸಿಕೊಳ್ಳಬೇಕಾಯಿತು. ಆದರೆ ಈ ಅಜ್ಞಾತವಾಸ ಕಾವ್ಯ ಕುಡಿವರಿದು ಬೆಳೆಯಲು ಅನುಕೂಲವಾಯಿತು. ಕ್ಯಾಂಟೊ ಜನರಲ್ ಕಾವ್ಯ ಇದೇ ಕಾಲದಲ್ಲಿ ರಚಿತವಾಯಿತು. ಅಮೆರಿಕ ಭೂಖಂಡವನ್ನು ಕುರಿತ ಅತಿ ಮಹತ್ತ್ವದ ಮಹಾಕಾವ್ಯ ಇದು. 1952ರಲ್ಲಿ ಚಿಲಿ ದೇಶದವಳೇ ಆದ ಮ್ಯಾಟಿಲ್ಡಾ ಉರೂಟಿಯಾಳೊಂದಿಗೆ ಮದುವೆ ಆಯಿತು. ಇದು ಮೂರನೆಯ ಮದುವೆ. ಇಸ್ಲಾನೆಗ್ರಾದಲ್ಲಿ ಮನೆ, ಸ್ಯಾಂಟೀಯಾಗೊದಲ್ಲಿ ಸ್ಯಾನ್ ಕ್ರಿಸ್ಟೋಬೆಲ್ ಬೆಟ್ಟದ ಬದಿಯ ಲಾ ಖ್ಯಾಸ್ಕೋನಾ ಎಂಬ ಮನೆ, ವ್ಯಾಲ್ಪರೈಸೋನಲ್ಲಿ ಲಾ ಸೆಬಾಸ್ಟಿಯಾನಾ ಎಂಬ ಮನೆ-ಹೀಗೆ ಕವಿಯ ಮನೆಗಳು ಮೂರು. ಇವು ಮೂರೂ ಮನೆಗಳು ಕವಿಯ ಒಳ್ಳೆಯ ಅಭಿರುಚಿಗೆ ಮಾದರಿಯಾಗಿದ್ದವು. ಸೊಗಸಾದ, ಅಪೂರ್ವವಾದ ಕಲಾಕೃತಿಗಳ ಸಂಗ್ರಹ ಕವಿಯ ಹವ್ಯಾಸವಾಗಿತ್ತು. ತನ್ನ ಪ್ರಿಯಮಿತ್ರ ಆಲೆಂಡ್ ಚಿಲಿಯ ಅಧ್ಯಕ್ಷನಾದಾಗ ನೆರೂದ ಪ್ಯಾರಿಸ್‍ನಲ್ಲಿ 1972ರವರೆಗೂ ಚಿಲಿಯ ರಾಯಭಾರಿಯಾಗಿದ್ದ. 1960-66ರ ಅವಧಿಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ, ಕ್ಯೂಬಾದಲ್ಲಿ ಪ್ರವಾಸ ಮಾಡಿದ.

 	ಆಲೆಂಡ್‍ನ ಕೊಲೆ ಕವಿಯ ಮನಸ್ಸಿಗೆ ದೊಡ್ಡ ಆಘಾತ ಉಂಟುಮಾಡಿತು. ಕ್ಯಾನ್ಸರ್ ರೋಗಕ್ಕೆ ಬಲಿಯಾಗಿ ಸ್ವದೇಶಕ್ಕೆ ಹಿಂತಿರುಗಿದ ಕವಿ ಕೆಲವೇ ದಿನಗಳಲ್ಲಿ ಅಂದರೆ 1973ರ ಸೆಪ್ಟೆಂಬರ್ 23ರಂದು ಆಸ್ಪತ್ರೆಯಲ್ಲಿ ಮರಣಹೊಂದಿದ. ಫ್ಯಾಸಿಸ್ಟ್ ಸರ್ಕಾರದ ದಮನಕಾರಿ ಕೃತ್ಯಗಳೇ ಕವಿಯ ಸಾವನ್ನು ಕ್ಷಿಪ್ರಗೊಳಿಸಿದವು. ಸತ್ತ ಮೇಲೂ ಕವಿಯ ಮನೆ ಮಠಗಳನ್ನೆಲ್ಲ ಜಪ್ತಿ ಮಾಡಿ ಸಿಕ್ಕ ಅನೇಕ ಕೃತಿಗಳ ಹಸ್ತಪ್ರತಿಗಳನ್ನು ಸರ್ಕಾರದ ಸೇನೆ ಸುಟ್ಟುಹಾಕಿತು.

 	ನೆರೂದನ ಒಟ್ಟು ಕೃತಿಗಳು ಅರವತ್ತು. ಇವೆಲ್ಲದರ ಮೊದಲ ಸಮಗ್ರ ವಿಮರ್ಶಾ ಸಮೀಕ್ಷೆಯಾದ ಅಮೇಡೊ ಅಲೋನ್ಸೊನ ಪೊಯೆಸಿಯಾ ಯಿ ಎಸ್ಟೆಲೊ ಎನ್ ಪ್ಯಾಬ್ಲೊ ನೆರೂದ ಎಂಬ ಗ್ರಂಥ 1940ರಲ್ಲಿ ಪ್ರಕಟವಾಯಿತು. 1957ರಲ್ಲಿ ನೆರೂದ ಕಾವ್ಯದ ಮೇಲೆ ಮತ್ತೆರಡು ವಿಮರ್ಶಾಗ್ರಂಥಗಳು ಬಂದವು. ಒಂದು-ಮೇರಿಯೊ ಜಾರ್ಜ್ ಡಿ ಲೆಲಿಸ್‍ನ ಪ್ಯಾಬ್ಲೊ ನೆರೂದ ಎಂಬ ಗ್ರಂಥ. ಎರಡು-ರಾಬರ್ಟೊ ಸಲಮಾ ಬರೆದ ಪ್ಯಾಬ್ಲೊ ನೆರೂದನ ಕಾವ್ಯ ವಿಮರ್ಶೆ ಎಂಬ ಗ್ರಂಥ. ರೆಸಿಡೆನ್ಸ್ ಆನ್ ಅರ್ತ್-ಕಾವ್ಯದ ವಿವರವಾದ ವ್ಯಾಖ್ಯಾನ, ವಿಮರ್ಶೆಗಳೂ ಬಂದಿವೆ. ಮಾರ್ಗರಿಟಾ ಎಗ್ಯೂರೆ ಬರೆದ ನೆರೂದನ ಜೀವನ ಚರಿತ್ರೆ `ಪ್ರತಿಭಾವಂತ ನೆರೂದ ಎಂಬುದೇ ಮೊದಲನೆಯದು (1964). ಇದರಲ್ಲಿ ಎಲ್ಲ ವಿವರಗಳೂ ಕಾಲಕ್ರಮದಲ್ಲಿ ಇವೆ. ನೆರೂದನ ಆತ್ಮಕಥೆಯೂ ಇದೆ.

 	ಪ್ರಚಂಡ ಜನಪ್ರಿಯತೆಯನ್ನು ಗಳಿಸಿದ ಪ್ರಭಾವಶಾಲಿ, ಶಕ್ತಿಶಾಲೆ, ಸೃಜನಶೀಲ ಕವಿ ನೆರೂದ. ಈತನದು ನಿರಂತರವಾದ ಸಮೃದ್ಧವಾದ ಬರೆಹ. ಈತನ ಕಾವ್ಯ, ಬಾಳಿನಲ್ಲಿ ಪಡೆದ ಅನುಭವಗಳ ಸಾರವನ್ನು ಹೀರಿ ಕವಿಯ ಚೇತನ ವಿಕಾಸಗೊಂಡಂತೆ, ಬದಲಾಗುತ್ತ ಹೋಯಿತು. ಶೃಂಗಾರಮಯವಾಗಿದ್ದ ಕಾವ್ಯ ಕಾಲ ಕಳೆದಂತೆ, ಮನೋಭಾವ ಪಕ್ವವಾದಂತೆ ಪಾರಮಾರ್ಥಿಕ ಗಂಭೀರತೆಯನ್ನು ತಳೆಯಿತು. ಸುತ್ತಣ ಲೋಕದ ವಿಷಮತೆ, ಅನ್ಯಾಯಗಳಿಗೆ ಸಿಡಿದೆದ್ದು ಸಾಮಾಜಿಕ ನ್ಯಾಯ ರಾಜಕೀಯ ಧರ್ಮಗಳಿಗಾಗಿ ಮೊಳಗಿದ ಕಾವ್ಯವಾಣಿ, ಲೋಕವ್ಯವಹಾರಗಳಿಂದ ಒಳಗೆಳೆದುಕೊಂಡ ಮನಸ್ಸು ಅಂತರ್ಮುಖಿಯಾದಾಗ ಜೀವನದ ನಿಗೂಢ ಸತ್ಯಗಳನ್ನರಸತೊಡಗಿತು. ರೆಸಿಡೆನ್ಸ್ ಆನ್ ಅರ್ತ್ ಕಾವ್ಯದಲ್ಲಿ ಇದು ವ್ಯಕ್ತವಾಗುತ್ತದೆ. ಅಲ್ಲಿನ ಅನೇಕ ಕವನಗಳು ಒಗಟಿನಂತಿರುವ ಬೆಡಗಿನ ವಚನಗಳಾಗಿವೆ. ನಿರಂತರ ಬೆಳವಣಿಗೆ, ನಿತ್ಯನೂತನತೆ, ವೈವಿಧ್ಯ-ಇವು ನೆರೂದನ ಕಾವ್ಯದ ಲಕ್ಷಣಗಳು. 1930ರ ಅನಂತರ ಕಮ್ಯೂನಿಸ್ಟ್ ತತ್ತ್ವಗಳಿಗೆ ಮಾರುಹೋಗಿ ಕಾವ್ಯವೆಲ್ಲ ಪೂರ್ಣವಾಗಿ ಕಮ್ಯೂನಿಸ್ಟ್ ದೃಷ್ಟಿಯನ್ನು ತಳೆಯಿತು. ವ್ಯಕ್ತಿನಿಷ್ಠ ಭಾವ ಮತ್ತು ಇಂದು ಜಗತ್ತನ್ನೆಲ್ಲ ಆವರಿಸಿರುವ ತೀವ್ರ ವಿಷಾದ ಭಾವ ಈತನ ಕವನಗಳ ಸಾಮಾನ್ಯ ಲಕ್ಷಣಗಳು. ಸಮಕಾಲೀನ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಬಂದ ಕವನಗಳೂ ಕೇವಲ ಸಾಮೂಹಿಕ ಕವಿತೆಗಳಾಗದೆ ನೆರೂದನ ಪ್ರತಿಭಾ ಮಾಯಾದಂಡದ ಸ್ಪರ್ಶದಿಂದ ಸಾರ್ವಕಾಲಿಕ ಸಾರ್ವತ್ರಿಕ, ಮೌಲ್ಯಗಳ ಅಭಿವ್ಯಕ್ತಿಯಾದವು. ಸಾಂಪ್ರದಾಯಿಕ ತಂತ್ರಗಳನ್ನು ತೊರೆದು ನೆರೂದ ತನ್ನದೇ ಆದ ವಿಶಿಷ್ಟ ತಂತ್ರಗಳನ್ನು ಬಳಸಿದ. ಈ ಹೊಸ ಪ್ರಯೋಗಗಳು ವೈಯಕ್ತಿಕ ಎಂಬಷ್ಟು ಪ್ರತ್ಯೇಕವಾಗಿವೆ. ಈ ನೂತನ ಕಾವ್ಯಶೈಲಿಗೆ ನೆರೂದಿಸ್ಮೊ ಎಂದೇ ಹೆಸರು ಬಂತು. ವಾಸ್ತವತೆ, ವ್ಯವಹಾರ ಕೌಶಲ್ಯ ಎರಡೂ ಇದರಲ್ಲಿ ಎದ್ದುಕಾಣುತ್ತದೆ. ಹಲವೆಡೆ ನೆರೂದ ಸರ್ರಿಯಲಿಸ್ಟ್ ತಂತ್ರಗಳನ್ನು ಬಳಸಿದರೂ ಆತ ಸರ್ರಿಯಲಿಸ್ಟ್ ಪಂಥದ ಕವಿ ಅಲ್ಲ. ರೆಸಿಡೆನ್ಸ್ ಆನ್ ಅರ್ತ್‍ನಲ್ಲಿ ಸರ್ರಿಯಲಿಸ್ಟ್ ಶೈಲಿಯ ಸಾಮಾನ್ಯ ಲಕ್ಷಣಗಳೆಲ್ಲ ಇವೆ. ನವ್ಯತೆಯನ್ನು ಬೇಕೆಂದೇ ನಿರಾಕರಿಸಿದ ಈತನ ಮನೋಧರ್ಮ ರೊಮ್ಯಾಂಟಿಕ್ ಮತ್ತು ಫ್ರೆಂಚ್ ಸಾಂಕೇತಿಕತೆಗಳ ಸಮನ್ವಯವನ್ನು ಸಾಧಿಸಲು ಪ್ರಯತ್ನಿಸಿತು. ಈತನ ಕಾವ್ಯದ ಸಾಮಾನ್ಯವಸ್ತು ಶೃಂಗಾರ ಇಲ್ಲವೆ ತಾತ್ತ್ವಿಕ ಜಿಜ್ಞಾಸೆ. ಎಲ್ಲದರಲ್ಲೂ ಇರುವ ಒಳದನಿ ವ್ಯಥೆ ಮತ್ತು ವೇದನೆ. ಈತನ ಕಾವ್ಯ ಪ್ರತಿಮೆಗಳನ್ನು ಸಮೃದ್ಧವಾಗಿ ಸೃಷ್ಟಿಸುತ್ತದೆ. ಓತಪ್ರೋತವಾಗಿ ಒಂದಾದ ಮೇಲೊಂದು ಚಿತ್ರಗಳು ಮೂಡಿಬರುತ್ತವೆ. ಅವನ್ನು ಜೋಡಿಸುವ ತಾರ್ಕಿಕ ಕೊಂಡಿ ಮಾತ್ರ ಕಾಣುವುದಿಲ್ಲ. ರಾಜಕೀಯ ಅಥವಾ ತಾತ್ತ್ವಿಕ ಸಿದ್ಧಾಂತಗಳ ಒತ್ತೂ ಅಲ್ಲಿ ಇರುವುದಿಲ್ಲ. ರೆಸಿಡೆನ್ಸ್ ಆನ್ ಅರ್ತ್‍ನ ಮೂರನೆಯ ಭಾಗದಲ್ಲಿ ಸರ್ರಿಯಲಿಸ್ಟ್ ರೀತಿಯೇ ಪ್ರಧಾನವಾಗಿದ್ದರೂ ಇದು ಸರ್ರಿಯಲಿಸ್ಟ್ ಕಾವ್ಯದಿಂದ ಬೇರೆಯಾಗಿಯೇ ನಿಲ್ಲುತ್ತವೆ. ಬದುಕಿನ ಮೂಲಭೂತ ಸತ್ಯಗಳ ಮೂಖಾಮುಖಿ ಅರಿವಿನಿಂದ ಉಂಟಾಗುವ ಭಾವತೀವ್ರತೆ, ಗಂಭೀರ ಅಭಿವ್ಯಕ್ತಿ ಈ ಕಾವ್ಯದ ವಿಶಿಷ್ಟ ಅಂಶಗಳು.

	ಲ್ಯಾಟಿನ್ ಅಮೆರಿಕ ದೇಶಗಳ ವಿಶಿಷ್ಟ ಮನೋಧರ್ಮವನ್ನು ಆಯಾ ದೇಶದ ಇತಿಹಾಸ ಮತ್ತು ನೈಸರ್ಗಿಕ ರೂಪ ಲಕ್ಷಣಗಳಿಂದಲೇ ಉದ್ಭವವಾದ ಪ್ರತಿಮೆಗಳಲ್ಲಿ ಅಭಿವ್ಯಕ್ತಿಸಿರುವ ನೆರೂದನ ಅಸಾಧಾರಣ ಪ್ರತಿಭೆಯನ್ನು ಕಾವ್ಯವಿಮರ್ಶಕರೆಲ್ಲ ಮೆಚ್ಚಿಕೊಂಡಿದ್ದಾರೆ. ರಾಜಕೀಯ ವಿಚಾರಗಳೇ ಸಾಮಾನ್ಯ ವಸ್ತುವಾಗಿರುವ ಎಲಿಮೆಂಟರಿ ಓಡ್ಸ್ ಕವನಗಳು ಕಲಾತ್ಮಕ ಅಭಿವ್ಯಕ್ತಿ ವಿಶೇಷದಿಂದಾಗಿ ಅಮೂಲ್ಯವಾಗಿವೆ.
 
ಕೇವಲ ಆದರ್ಶದ ಕನಸುಗಾರಿಕೆ ನೆರೂದನ ಸ್ವಭಾವವಲ್ಲ; ವರ್ತಮಾನದ ಸಮಾಜ ಕಲ್ಯಾಣವೇ ಈತನ ಸದ್ಯದ ಮತ್ತು ತುರ್ತಿನ ಗುರಿ. ಕಮ್ಯೂನಿಸ್ಟ್ ತತ್ತ್ವಗಳಿಗೆ ಒಲಿದ ಮೇಲೆ ಈತ ಬರೆದುದೆಲ್ಲ ಫ್ಯಾಸಿಸ್ಟ್‍ರ ವಿರುದ್ಧ, ಶೋಷಣೆಯ ವಿರುದ್ಧ, ಅನ್ಯಾಯಕೆಂದೆಂದೂ ತಲೆಬಾಗದವರ, ಹೋರಾಟದಲ್ಲೆಂದೂ ಸೋಲದವರ ಕವಿ ಎನಿಸಿದ ನೆರೂದ. ಬಾಳಿನ ಕೊನೆಯ ಕ್ಷಣದವರೆಗೂ ತನ್ನ ಧ್ಯೇಯಸಾಧನೆಗಾಗಿ ಅವಿಶ್ರಾಂತವಾಗಿ ದುಡಿದ. ತನ್ನ ಬಾಳಿನ ನೆನಪುಗಳನ್ನೂ ಕವನಗಳನ್ನೂ ಚಿರಸ್ಮರಣೀಯ ಪದಗಳಲ್ಲಿ ಬರೆಯುತ್ತಲೇ ಇದ್ದ. ದಿನ ನಿತ್ಯದ ಸಣ್ಣ ಸಂಗತಿಗಳು, ಕಡಲು, ಈ ನೆಲದ ಬದುಕು, ಶೋಷಣೆ, ಅವಮಾನ, ನೂರಾರು ದೈನ್ಯಗಳಿಗೆ ಒಳಗಾದವರ ನೋವು, ಈ ಎಲ್ಲಕ್ಕೂ ಈತನ ಕಾವ್ಯ ಕಂಠದಾನ ಮಾಡಿತು. ನೆರೂದ ಇಡೀ ಮಾನವ ಕುಲದ ಮುಖವಾಣಿ. ಎಲ್ಲರ ಆಶೋತ್ತರಗಳ ಅಭಿವ್ಯಕ್ತಿ.
 
ಇಂಗ್ಲಿಷಿಗೆ ಮತ್ತು ಬೇರೆ ಬೇರೆ ಭಾಷೆಗಳಿಗೆ ಅನುವಾದವಾಗಿರುವ ನೆರೂದನ ಕೃತಿಗಳು;
ರೆಸಿಡೆನ್ಸ್ ಆನ್ ಅರ್ತ್ ಅಂಡ್ ಅದರ ಪೊಯೆಮ್ಸ್: 1946, 1962. ಅನುಕ್ರಮವಾಗಿ ಏಂಜೆಲ್ ಫೊರಸ್, ಕ್ಲೇಟನ್ ಎಷ್ಲ್‍ಮನ್.

ದಿ ಹೈಟ್ಸ್ ಆಫ್ ಮಾಚ್ಚುಪಿಚ್ಚು, 1967. ನ್ಯಾಥಾನಿಯಲ್ ಟಾರ್ನ್.
ಪೀಸ್ ಫಾರ್ ಟ್ವೈಲೈಟ್ಸ್ ಟು ಕಮ್, 1950. ಜಯಂತ್ ಭಟ್.
ಎಲಿಮೆಂಟರಿ ಓಡ್ಸ್, 1961. ಕಾರ್ಲೋಸ್ ಲೋ ಜಾನೊ.
ಸೆಲೆಕ್ಟೆಡ್ ಪೋಯೆಮ್ಸ್ ಬೈ ಪಾಬ್ಲೋ ನೆರೂದ, 1944. ಏಂಜೆಲ್ ಫ್ಲೋರೆಸ್.
ಲೆಟ್ ದಿ ರೇಯ್ಲ್ ಸ್ಪ್ಲಿಟರ್ ಅವೇಕ್ ಆ್ಯಂಡ್ ಅದರ್ ಪೊಯೆಮ್ಸ್, 1950.
ಸೆಲೆಕ್ಟೆಡ್ ಪೋಯೆಮ್ಸ್, 1961, ಬೆನ್ ಲಿಟಲ್
ಟ್ವೆಂಟಿ ಪೋಯೆಮ್ಸ್ ಆಫ್ ಪಾಬ್ಲೋ ನೆರೂದ. 1966. ರಾಬರ್ಟ್ ಬ್ಲೈ ಮತ್ತು ಜೇಮ್ಸ್ ರೈಟ್
ಮರಳಿ ಬರುವೆ (ನೆರೂದನ ಕೆಲವು ಆಯ್ದ ಕವನಗಳು), 1977, ಕನ್ನಡಕ್ಕೆ-ತೇಜಸ್ವಿನಿ ನಿರಂಜನ.
10.  ಆಯ್ದ ಕವನಗಳು, 1977, ಕನ್ನಡಕ್ಕೆ - ನಿಸಾರ್ ಅಹಮದ್. ಸಮಿಟ್ಸ್ ಆಫ್ ಮಾಚ್ಚುಪಿಚ್ಚು ಕವನ (ಕ್ಯಾಂಟೊ ಜನರಲ್‍ನಿಂದ ಆಯ್ದ), ವ್ಹಿಚ್ ಬರ್ನೆಟ್ ಸಂಪಾದಿತ ದಿ ವಲ್ರ್ಡ್ ಬೇಸ್ಟ್ ಕವನ ಸಂಕಲನದಲ್ಲಿ (1950) ಸೇರಿಸಲ್ಪಟ್ಟಿದೆ.
ನೆರೂದ ಭಾಷಾಂತರಿಸಿದ ಕೃತಿಗಳು: 1 ದಿ ಡಾಟರ್ಸ್ ಆಫ್ ಆಲ್ಬಿಯೋನ್. 2 ದಿ ಮೆಂಟಲ್ ಟ್ರ್ಯಾವಲರ್. ಮೂಲ: ವಿಲಿಯಂ ಬ್ಲೇಕ್. 3 ರೋಮಿಯೋ ಜೂಲಿಯಟ್-ಷೇಕ್ಸ್‍ಪಿಯರ್.
ನೆರೂದ ಗಳಿಸಿದ ಪ್ರಶಸ್ತಿಗಳು: 1 ಇಂಟರ್‍ನ್ಯಾಷನಲ್ ಪೀಸ್ ಪ್ರೈಜ್ 1950 (ನೀಗ್ರೋ ಗಾಯಕ ಪಾಲ್ ರೋಬ್ಸನ್‍ನೊಂದಿಗೆ ಹಂಚಿಕೊಂಡ). 2 ಲೆನಿನ್ ಪೀಸ್ ಪ್ರೈಜ್, 1953. 3 ಚಿಲಿಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ. 4 ನೊಬೆಲ್ ಪಾರಿತೋಷಕ, 1971. 5 ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್. 6 ಚಿಲಿ ವಿಶ್ವವಿದ್ಯಾನಿಲಯ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯಗಳ ಗೌರವ ಸದಸ್ಯತ್ವ.											(ಕೆ.ಬಿ.ಪಿ.)

	ಸ್ಪೇನಿನ ಅಂತರ್ಯುದ್ಧದಲ್ಲಿ (1936-39) ನೆರೂದ ಉದಾರ ಮನೋಧರ್ಮದ ಸ್ಪ್ಯಾನಿಷ್ ರಿಪಬ್ಲಿಕನರ ವಾಮಪಂಥೀಯ ಪಕ್ಷವನ್ನು ಬೆಂಬಲಿಸಿದ. 1948ರಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಸರ್ಕಾರವು ಬಹಿಷ್ಕರಿಸಿದಾಗ ನೆರೂದ ಮತ್ತು ಅವನಂತೆ ಹೋರಾಡಿದವರು ದೇಶಭ್ರಷ್ಟತೆ ಬಂಧನ ಎರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕಾಯಿತು. ನೆರೂದ ದೇಶವನ್ನು ಬಿಟ್ಟು ಹೋದ. 1952ರಲ್ಲಿ ಪಕ್ಷದ ಮೇಲಿನ ಬಹಿಷ್ಕಾರವನ್ನು ಸರ್ಕಾರ ಹಿಂದಕ್ಕೆ ತೆಗೆದುಕೊಂಡಾಗ ಸ್ಪೇನಿಗೆ ಹಿಂದಿರುಗಿದ.

	ಸಂಕೇತ ಪಂಥದಲ್ಲಿ ಕಾವ್ಯರಚನೆ ಪ್ರಾರಂಭಿಸಿದ ಈ ಕವಿ ಅನಂತರ ಸರ್ರಿಯಲಿಸಮ್‍ಗೆ ಒಂದು ಕಡೆಗೆ ವಾಸ್ತವತೆಯನ್ನು ಆರಿಸಿಕೊಂಡ ಪ್ರಾರಂಭದಲ್ಲಿ ಪ್ರಣಯ ಕಾವ್ಯವನ್ನು ಬರೆದ, ಅನಂತರ ತನ್ನ ಸಾಮಾಜಿಕ ಮತ್ತು ರಾಜಕೀಯ ನಂಬಿಕೆಗಳನ್ನು ಕವನಗಳಲ್ಲಿ ಅಭಿವ್ಯಕ್ತಿಗೊಳಿಸಿದ.

	1950ರಲ್ಲಿ ಪ್ರಕಟವಾದ `ಕ್ಯಾಂಟೋ ಜನರಲ್ ಒಂದು ಮಹಾಕಾವ್ಯ ಇದು ಸ್ಪೇನಿನ ಚರಿತ್ರೆಯನ್ನು ಕಮ್ಯುನಿಸ್ಟ್ ದೃಷ್ಟಿಯಿಂದ ವ್ಯಾಖ್ಯಾನಿಸುತ್ತದೆ. ದಾರಿದ್ರ್ಯ ಮತ್ತು ದಬ್ಬಾಳಿಕೆಗಳಿಂದ ಸ್ವಾತಂತ್ರ್ಯ ಪಡೆಯಲು ಜನತೆ ನಡೆಸಿದ ಹೋರಾಟವನ್ನು ಚಿತ್ರಿಸುತ್ತದೆ.

	ಪೆರುವಿನಲ್ಲಿರುವ ಮಚು ಪಿಚು ಎನ್ನುವ ಸ್ಥಳದಲ್ಲಿ ಚಾರಿತ್ರಿಕ ಅವಶೇಷಗಳನ್ನು ಕವಿ ಕಂಡ, ಈ ಅನುಭವವೇ `ಮಚುಪಿಚುವಿನ ಉನ್ನತ ಸ್ಥಳಗಳು (1958) ಕವನಕ್ಕೆ ಸ್ಫೂರ್ತಿಯನ್ನು ನೀಡಿತು. ಮಚುಪಿಚುವಿನಲ್ಲಿ ಎತ್ತರದ ಸ್ಥಳದಲ್ಲಿ ನಿಂತು ನಗರದ ಅವಶೇಷಗಳನ್ನು ಕಂಡ ಕವಿ, ಅಲ್ಲಿನ ಜನರು ಬದುಕಿದ್ದಾಗ ಅವರಿಗೆ ದನಿ ಇರಲಿಲ್ಲ, ತಾನು ಅವರ ದನಿಯಾಗುತ್ತೇನೆ ಎಂದು ನಿರ್ಧರಿಸುತ್ತಾನೆ. ಕಾವ್ಯ ಜಗತ್ತಿನಲ್ಲಿ ತನ್ನ ವೈಯಕ್ತಿಕ ಅನುರಾಗಗಳನ್ನು ಮೀರಿ ಕವಿ ಮೂಕ ಜನತೆಯ ದನಿಯಾಗುವ ಪ್ರಕ್ರಿಯೆ ಇಲ್ಲಿದೆ. `ಭೂಮಿಯ ಮೇಲೆ ವಾಸ ಮತ್ತು ಇತರ ಕವನಗಳು ಮೂರು ಸಂಪುಟಗಳ ಕವನ ಸಂಗ್ರಹ; ಈ ಕವನಗಳಲ್ಲಿ ಕವಿಯು ಬೇರೆ ಬೇರೆ ನಾಗರಿಕತೆಗಳು ಸಾಧಿಸಿದ ವಿನಾಶದ ಚಿತ್ರಗಳನ್ನು ಕೊಡುತ್ತ ಗಂಭೀರ ವಿಷಾದದ ಮನಸ್ಥಿತಿಯನ್ನು ಪಡೆಯುತ್ತಾನೆ. ನೆರೂದ ಆತ್ಮವೃತ್ತದ ಅಂಶಗಳಿಂದ ಹಲವು ಕವನಗಳನ್ನು ಬರೆದ.
										  ಪರಿಷ್ಕರಣೆ
								             ಪ್ರೊ.ಎಲ್.ಎಸ್.ಎಸ್.
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ